ಒಂದು ನೃತ್ತ ಭೇದ. ನೃತ್ತದಲ್ಲಿ ತಾಳ ಮತ್ತು ಲಯಗಳಿಗನುಗುಣವಾಗಿ ಸೊಂಟ ತೋಳು ಪಾದ ತೊಡೆ ಕಣಕಾಲುಗಳನ್ನು ವಿಳಂಬವೂ ವೇಗವೂ ಇಲ್ಲದಂತೆ ವಿಲಾಸದಿಂದ ಕೋಮಲವಾಗಿ ವಿವಿಧ ಪ್ರಕಾರದಲ್ಲಿ ಚಲಿಸುವುದು ಚಾರಿ. ಭರತನಾಟ್ಯದಲ್ಲಿ 32 ವಿಧ ಚಾರಿಗಳ ವಿವರವಿದೆ. ಇವು ಮಾರ್ಗ ಚಾರಿಗಳು. ಈ ಚಾರಿಗಳಲ್ಲಿ ಕೆಲವನ್ನು ಎಡ ಬಲ ಪಾದಗಳ ವಿನ್ಯಾಸಭೇದದಿಂದ ಮಾಡುವ ನೃತ್ತವೇ ಮಂಡಲ. ಚಾರಿಗಳ ಸಮುದಾಯಕ್ಕೆ ಮಂಡಲವೆಂದು ಹೆಸರು. ಇದರಲ್ಲಿ ಭೌಮ ಆಕಾಶ ಎಂದು ಎರಡು ಬಗೆ. ಈ ಎರಡರಲ್ಲೂ ಪ್ರತ್ಯೇಕವಾಗಿ ಹತ್ತು ಪ್ರಭೇದಗಳಿವೆ. ಭೌಮಮಂಡಲದ ಪ್ರಭೇದಗಳಲ್ಲಿ ಆವರ್ತ ಮೂರನೆಯದು. ಇದರಲ್ಲಿ ಜನಿತ ಸ್ಥಿತಾವರ್ತ ಶಕಟಾಸ್ಯ ಏಲಕಾಕ್ರೀಡಿತ ಊರೂದ್ವೃತ್ತ ಅಡ್ಡಿತ ಜನಿತ ಸಮೋಸರಿತಮತ್ತಲ್ಲಿ ಶಕಟಾಸ್ಯ ಊರೂದ್ವೃತ ಚಾರಿಗಳನ್ನು ಬಲ ಮತ್ತು ಎಡಗಾಲಿನಿಂದ ಕ್ರಮವಾಗಿ ಒಂದೊಂದನ್ನೇ ಮಾಡಿ ಬಲಗಾಲಿನಿಂದ ಎರಡಾವರ್ತಿ ಚಾಷಗತಿ ಚಾರಿಯನ್ನೂ ಎಡಗಾಲಿನಿಂದ ಸ್ಯಂದಿತ ಶಕಟಾಸ್ಯ ಚಾರಿಗಳನ್ನೂ ಮತ್ತೆ ಬಲಗಾಲಿನಿಂದ ಭ್ರಮರ ಚಾರಿ ಮತ್ತು ಎಡಗಾಲಿನಿಂದ ಚಾಷಗತಿ ಚಾರಿಯನ್ನೂ ಮಾಡಬೇಕು.

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ